ರಾಜಪುರೋಹಿತ, ಜಯತೀರ್ಥ
1925-86. ಆಡಳಿತ ಹಾಗೂ ಸಾಹಿತ್ಯ ರಚನೆ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಕರ್ನಾಟಕದ ಐ.ಎ.ಎಸ್. ಅಧಿಕಾರಿ, ಕನ್ನಡ ಅಭಿವೃದ್ಧಿಗಾಗಿ ಹಾಗೂ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡುವ ದಿಕ್ಕಿನಲ್ಲೂ ಇವರ ಕೊಡುಗೆ ಅಪಾರವಾದುದು. 

ಗಂಗಾವತಿ ತಾಲ್ಲೂಕಿನ ಕನಕಗಿರಿ ಗ್ರಾಮ ರಾಜಪುರೋಹಿತರ ಪೂರ್ವಜರ ಸ್ಥಳ. ಇದು ವಿಜಯನಗರ ಸಾಮ್ರಾಜ್ಯದ ಪತನಾ ನಂತರ ಒಂದು ಸಣ್ಣ ಪಾಳೆಪಟ್ಟಾಗಿತ್ತು. ಈ ಸಂಸ್ಥಾನಕ್ಕೆ ಗುಜ್ಜುಲು ವಂಶದವರು ಒಡೆಯರು. ಈ ನಾಯಕರ ರಾಜಮನೆತನಕ್ಕೆ ಜಯತೀರ್ಥರ ಪೂರ್ವಜರು ರಾಜಪುರೋಹಿತರಾಗಿದ್ದು. ಜಯತೀರ್ಥರದು ಆಗರ್ಭ ಶ್ರೀಮಂತ ಮನೆತನವಲ್ಲದಿದ್ದರೂ ನಿತ್ಯ ಅಕ್ಕಿಯ ಅನ್ನ ಉಣ್ಣುವಷ್ಟು ಶ್ರೀಮಂತಿಕೆಯಿತ್ತು. ರಾಜಪುರೋಹಿತನ ಹಾಗೂ ಇಪ್ಪತ್ತು ಹಳ್ಳಿಗಳ ಜೋಯಿಸತನ ಇವರ ಆಸ್ತಿ. ಜಯತೀರ್ಥರು 1925 ಜುಲೈ 1ರಂದು ಶೇಷಾಚಾರ್ಯ ಹಾಗೂ ರಂಗಮ್ಮ ದಂಪತಿಗಳ ಮೂರನೆಯ ಮಗುವಾಗಿ ಜನ್ಮ ತಳೆದರು. ಹನ್ನೆರಡು ಮಕ್ಕಳನ್ನು ಹೆತ್ತ ಆ ತಾಯಿಗೆ ಉಳಿದದ್ದು ಎರಡೇ ಮಕ್ಕಳು- ಜಯತೀರ್ಥ ಹಾಗೂ ನರಸಿಂಹ. ಈ ಇಬ್ಬರ ಮಧ್ಯದ ಅಂತರ 16 ವರ್ಷ. ಇವರ ಬಾಲ್ಯ ಮನೆಯಲ್ಲಿ ಎಲ್ಲರ ಪ್ರೀತಿಗೆ ಆಸರೆಯಲ್ಲಿ ಅದರಲ್ಲೂ ಅಜ್ಜಿ ಜೀವಮನ ಅಕ್ಕರೆಯ ಮಡಿಲಲ್ಲಿ ಕಳೆಯಿತು. ಶಾಲೆಯಲ್ಲಿ ಗುರು ಶ್ರೀ ಬಸವಲಿಂಗಯ್ಯನವರೂ ಮನೆಯಲ್ಲಿ ಸಂಸ್ಕøತ ಪಂಡಿತರಾದ ತಂದೆಯವರೂ ಇವರಿಗೆ ಸಂಸ್ಕøತ, ಮಾಧ್ವಪಂಥಕ್ಕೆ ಸಂಬಂಧಿತ ಸಾಹಿತ್ಯ ಹಾಗೂ ಹರಿದಾಸರ ಹಾಡುಗಳ ಅಧ್ಯಯನ ಇತ್ಯಾದಿಗಳನ್ನು ಅಭ್ಯಾಸ ಮಾಡಿಸಿದರು. ತಂದೆಗೆ ಮಗ ಸಂಸ್ಕøತ ವಿದ್ವಾಂಸನಾಗಬೇಕೆಂಬ ಹಂಬಲ. ರಾಜಪುರೋಹಿತರು ಚಿಕ್ಕವರಿರುವಾಗಲೇ ಜಾತ್ರೆ ಹಾಗೂ ಉತ್ಸವಗಳಲ್ಲಿ ಹರಿಕಥೆಗಳನ್ನೂ ಹೇಳಿ ಸೈ ಎನ್ನಿಸಿಕೊಂಡರು. ಆರೋಗ್ಯ ಕೆಟ್ಟದ್ದರಿಂದ ಶಾಲೆಗೆ ಶರಣುಹೊಡೆದು ಲಗ್ನ, ಶ್ರಾದ್ಧ ಹಾಗೂ ಸತ್ಯ ನಾರಾಯಣ ಪೂಜಾಕಾರ್ಯಗಳಲ್ಲಿ ನಿರತರಾದರು. ತಂದೆಯ ಒತ್ತಡಕ್ಕೆ ಹಾಗೂ ಉತ್ತರಾದಿ ಮಠದ ಯತಿವರ್ಯ ಸತ್ಯಧ್ಯಾನ ತೀರ್ಥರ ಸೂಚನೆಯ ಮೇರೆಗೆ ಕೊಪ್ಳಳದ ಖ್ಯಾತ ವಿದ್ವಾಂಸರಾದ ಹುಲಗಿ ಹುಚ್ಚಾಚಾರ್ಯರಲ್ಲಿ ಸಂಸ್ಕøತದ - ತರ್ಕ ಶಾಸ್ತ್ರದ - `ತರ್ಕಸಂಗ್ರಹ ಪಾಠ ಆರಂಭವಾಯಿತು. ಈ ಅಧ್ಯಯನ ಶುದ್ಧ ಗುರುಕುಲ ಪದ್ಧತಿಯದು. ರಾಜಪುರೋಹಿತರಿಗೆ ಅದು ಸರಿಬೀಳಲಿಲ್ಲ. ಇದಕ್ಕೆ ಆಸರೆಯಾಗಿ ಲೌಕಿಕ ಅಭ್ಯಾಸ ಮುಂದುವರಿಸಲು ಅಲ್ಲಿಯ ಸ್ಕೂಲಿನ ಹೆಡ್ಮಾಸ್ಟರ್ ಸಂಗಮ್ಮನವರ ಪ್ರೋತ್ಸಾಹ. ಹೊಸ ಜಗತ್ತಿನ ಆಧುನಿಕ ಅಭ್ಯಾಸದ ಆಮಿಷ ಒಂದು ಕಡೆ, ಮನೆಯ ತುಂಬ ಹಾಗೂ ಮನೆಯ ಹೊರಗೆ ಮಡಿಮಡಿ ಎಂಬ ವಾತಾವರಣದ ಓಕರಿಕೆ ಇನ್ನೊಂದು ಕಡೆ. ಹೀಗಾಗಿ ಪರಂಪರಾಗತ ಅಧ್ಯಯನಕ್ಕೆ ಶರಣು ಹೊಡೆದು ಅಲ್ಲಿಂದ ಪಲಾಯನ ಮಾಡಿದರು. ಪ್ರಯಾಣ ಬೆಳೆಸಿ ರಾಯಚೂರನ್ನು ತಲುಪಿದರು. ಗದ್ವಾಲ್ ಸಂಸ್ಥಾನದ ಆಸ್ಥಾನಕ್ಕೆಹೋಗಿ ತಮ್ಮ ವಿದ್ಯೆಯನ್ನು ಪ್ರದರ್ಶಿಸಿ ಒಂದಷ್ಟು ಹಣ ಪಡೆದರು. ಹೀಗೆ ಮಂತ್ರಾಲಯದ ಆರಾಧನೆಗೆ ಹೋದಾಗ ಇವರನ್ನೇ ಹುಡುಕುತ್ತ ಹೊರಟಿದ್ದ ತಂದೆಯ ಕೈಗೆ ಸಿಕ್ಕಿಬಿದ್ದರು.

ಸಂಗೀತ ಕಲಿಯಲು ಬರೋಡಕ್ಕೆ ಹೋಗಬೇಕೆಂದು ಆಸೆಪಟ್ಟಿದ್ದ ಜಯತೀರ್ಥರು ತಂದೆಯ ಜೊತೆಗೆ ಊರಿನಲ್ಲಿ ಹಿಂದಿರುಗಿದರು. ಆ ವೇಳೆಗಾಗಲೇ ಚೆಂಡಿಕೆಯ ಜಾಗದಲ್ಲಿ ಕ್ರಾಪುಕಟ್ಟು ಮಾಡಿಸಿ ಹೊಸಹಾದಿ ತುಳಿದಿದ್ದರು. ಮದುವೆಯ ಹಂಬಲದಿಂದಾಗಿ ಹುಡುಗ ಓಡಿಹೋಗಿರಬೇಕೆಂದು ತರ್ಕಿಸಿದ ಹಿರಿಯರು ಇವರ ಮದುವೆಯ ಏರ್ಪಾಟುಮಾಡಿಸಿದರು. ಅನಂತರ ವಿದ್ವಾಂಸರಾದ ರಾಮಚಂದ್ರರಾವ್ ಪಟವಾರಿ ಅವರ ಪುತ್ರಿ ಸೀತಾ ಜೊತೆಗೆ ಇವರ ವಿವಾಹವಾಯಿತು. ಆಕೆ ಏಳನೆಯ ತರಗತಿಯವರೆಗೆ ಓದಿದ್ದರು. ಈ ಮದುವೆ ರಾಜಪುರೋಹಿತರ ಜೀವನದಲ್ಲಿ ಹೊಸ ತಿರುವನ್ನು ತಂದಿತು. ಮತ್ತೆ ಲೌಕಿಕ ವಿದ್ಯಾರ್ಜನೆಯ ಕಡೆಗೆ ಮುಖ ಮಾಡಿದರು. ಬನಾರಸ ಹಿಂದೂ ವಿಶ್ವವಿದ್ಯಾಲಯದ ಎಸ್.ಎಸ್.ಎಲ್.ಸಿ. (ಅಡ್‍ಮಿಷನ್ ಎಕ್ಸಾಮಿನೇಷನ್ ಸರ್ಟಿಫಿಕೇಟ್) ಮುಗಿಸಿದರು. ಖಾಸಗಿಯಾಗಿಯೇ ಅಜಮೇರ್ ಇಂಟರ್ ಪರೀಕ್ಷೆ ಪಾಸುಮಾಡಿದರು. ಅನಂತರ ಹೈದರಬಾದಿನಲ್ಲಿಯೇ ಉಸ್ಮಾನಿಯಾ ವಿಶ್ವವಿದ್ಯಾಲಯದ ಬಿ.ಎ. ಪದವಿಯನ್ನು ರ್ಯಾಂಕ್‍ನೊಂದಿಗೆ ಗಳಿಸಿದರು.

ಹೈದರಬಾದಿನಲ್ಲಿ ನಡೆದ ಅಖಿಲ ಭಾರತ 26ನೆಯ ಕನ್ನಡ ಸಾಹಿತ್ಯ ಸಮ್ಮೇಳನ (1941) ಇವರಿಗೆ ಅನೇಕ ಸಾಹಿತಿಗಳ ಸಂಪರ್ಕಕ್ಕೆ ಕಾರಣವಾಯಿತು. ಈ ಅವಧಿಯಲ್ಲಿಯೆ ರಾಜಪುರೋಹಿತರು ತಮ್ಮನ್ನು ಕನ್ನಡ ಸಾಹಿತ್ಯ ರಚನೆ, ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಈ ಸಮ್ಮೇಳನದ ಅಧ್ಯಕ್ಷರಾಗಿದ್ದ ಎ. ಆರ್. ಕೃಷ್ಣಶಾಸ್ತ್ರೀಯವರು ರಾಜಪುರೋಹಿತರ ಮಾವ ರಾಮಚಂದ್ರರಾವ್ ಪಟವಾರಿ ಅವರ ಖಾಸಾ ಗುರುಗಳಲ್ಲಿ ಒಬ್ಬರು. ಕನ್ನಡದ ದೀಕ್ಷೆಗೆ ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಧೀರ ಭಾಷಣವೇ ರಾಜಪುರೋಹಿತರಿಗೆ ಆಂತರಿಕ ಪ್ರೇರಣೆಯನ್ನೊದಗಿಸಿತು. ಇಂಗ್ಲಿಷ್ ಪ್ರಾಧ್ಯಾಪಕರಾಗಿದ ವಿ. ಕೃ. ಗೋಕಾಕ್‍ರ ಸಹಯೋಗವೂ ಈ ದಿಕ್ಕಿನಲ್ಲಿ ನೆರವಾಯಿತು. ರಾಜಪುರೋಹಿತರು 1949ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಹಶಿಲ್ದಾರರಾಗಿ ನೇಮಕಗೊಂಡರು. ಅನಂತರ ಡೆಪ್ಯುಟಿ ಕಮಿಷನರ್, ಮುನ್ಸಿಪಲ್ ಕಮಿಷನರ್, ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಣಾಧಿಕಾರಿ, ನೀರಾವರಿ ಯೋಜನೆಗಳ ಆಡಳಿತಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಕನ್ನಡ ಅಭಿವೃದ್ದಿ ನಿರ್ದೇಶನಾಲಯದ ಪ್ರಥಮ ನಿರ್ದೇಶಕ ವಿದ್ಯಾ ಇಲಾಖೆಯ ಉಪಕಾರ್ಯದರ್ಶಿ, ಸ್ಥಾಪನೆ ಆಗಬೇಕಾಗಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ನಿಯೋಜಿತ ಅಧಿಕಾರಿ, ವಿಶ್ವವಿದ್ಯಾಲಯ ಸ್ಥಾಪನೆಗೊಂಡಾಗ ಅದರ ಮೊದಲ ಕುಲಸಚಿವ -ಹೀಗೆ ವಿವಿಧ ಹುದ್ದೆ ಹಾಗೂ ಜವಬ್ದಾರಿಗಳಲ್ಲಿ ನಿಸ್ಪøಹವಾಗಿ ದುಡಿದರು. ಕನ್ನಡ ಅಭಿವೃದ್ದಿ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಆ ಇಲಾಖೆಗೊಂದು ಯುಕ್ತ ಬುನಾದಿಯನ್ನು ಹಾಕಿ ಕನ್ನಡ ಅಭಿವೃದ್ದಿಯ ದಿಕ್ಕು ದೆಸೆಗಳನ್ನು ರೂಪಿಸಿದರು.

ರಾಜಪುರೋಹಿತರು ದಕ್ಷ ಆಡಳಿತಗಾರರೆಂದು ಹೆಸರು ಗಳಿಸುವಂತೆ ಉತ್ತಮ ಸಾಹಿತಿಯಾಗಿಯೂ ಹೆಸರು ಗಳಿಸಿದ್ದಾರೆ. ಕಾದಂಬರಿ, ಸಣ್ಣಕಥೆ, ನಾಟಕ, ಜೀವನ ಚರಿತ್ರೆ, ಕನ್ನಡ ತೀರ್ಪುಗಳು, ಆಡಳಿತ ಕನ್ನಡ _ ಹೀಗೆ ಹಲವು ವಿಷಯಗಳನ್ನು ಕುರಿತು ಗ್ರಂಥಗಳನ್ನು ಲೇಖನಗಳನ್ನೂ ಬರೆದಿದ್ದಾರೆ. ಹಾಲುಜೇನು, ಸುಳಿಗಾಳಿ (ಅನಂತರ ಜೇನಸುಳಿ) ಜೊಹಾರಾ, ಕಡಲತೋಳ, (ಜಾಕ್ ಲಂಡನ್‍ನ ಸೀವುಲ್ಫ್ ಕಾದಂಬರಿಯ ಅನುವಾದ) _ಇವು ಕಾದಂಬರಿಗಳು. ಸುಳಿಗಾಳಿ ಕಾದಂಬರಿಗೆ ಸುಧಾ ಪತ್ರಿಕೆಯ ರಾಜ್ಯಮಟ್ಟದ ಬಹುಮಾನವೂ ಅನಂತರ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರೆತಿವೆ. ಜೊಹರಾ ಬಿಜಾಪುರ ಇತಿಹಾಸಕ್ಕೆ ಸಂಬಂಧಿಸಿದ ಒಂದು ಐತಿಹಾಸಿಕ ಕಾದಂಬರಿ. ಜೊಹರಾ ಮತ್ತು ಅಬ್ಬಾಸ್ ಖಾನರ ಪ್ರೀತಿ, ಅವರು ಎದುರಿಸಿದ ಅನೇಕ ಎಡರು ತೊಡರುಗಳು. ಸಮಾಗಮ_ ಇವೇ ಈ ಕಾದಂಬರಿಯ ಕೇಂದ್ರಬಿಂದು. ಮುದ್ಗಲ್ಲಿನಲ್ಲಿ ಮೇರಿಯಾ ಎಂಬ ಇವರದೇ ಸಣ್ಣಕಥೆಯ ವಿಸ್ತøತರೂಪವೇ ಈ ಕಾದಂಬರಿ. ಪಾರವ್ವನ ಪಂಚಾಯತಿ, ರೋಹಿಣಿ, ಮೌಲ್ಯಗಳು ಮತ್ತು ಶಿಥಿಲತೆ _ಇವು ಸಣ್ಣಕಥೆಗಳ ಸಂಕಲನಗಳು, ತುಂಗೆಯಂಗಳದಲ್ಲಿ (ಗೀತರೂಪಕ), ಕುಮಾರವ್ಯಾಸ, ಜಯಬಂಗ್ಲಾ _ ಇವು ನಾಟಕಗಳು. ವ್ಯಾಸರಾಯ ಜಗನ್ನಾಥದಾಸರು, ಸುರಪುರದ ಶೂರನಾಯಕರು, ಸ್ವಾಮಿ ರಾಮತೀರ್ಥ, ಕೃಷ್ಣದೇವರಾಯ -ಇವೇ ಜೀವನಚರಿತ್ರೆಗಳು.

ಕನ್ನಡ ತೀರ್ಪುಗಳು ಎಂಬ ಕೃತಿ ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿದೆ. ನ್ಯಾಯಾಲಯದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವ ದಿಕ್ಕಿನಲ್ಲಿ ಈ ಕೃತಿ ತುಂಬ ಮಹತ್ತ್ವದ ಪಾತ್ರವಹಿಸಿತೆಂದು ಹೇಳಬಹುದು. ಆಡಳಿತದಲ್ಲಿ ಕನ್ನಡ (ಈ ಕೃತಿ ಇಂಗ್ಲಿಷ್‍ನಲ್ಲೂ ಇದೆ) _ಇವರ ಇನ್ನೊಂದು ಗ್ರಂಥ. ಕನ್ನಡ ತೀರ್ಪುಗಳು ಕೃತಿಗೆ ವಿಶೇಷ ರಾಜ್ಯ ಪ್ರಶಸ್ತಿ ಲಭ್ಯವಾಗಿದೆ. ತುಂಗಾತರಂಗ, ಕಛೇರಿ ಕೈಪಿಡಿ, ಪಂಪಾಸಂಪದ, ಪಂಪಾ ತುಂತುರು, ಆಡಳಿತ ಭಾಷಾ ಸಮಸ್ಯೆಯ ವಿಶ್ಲೇಷಣೆ, ಬಹುಮಾನಿತಿ ಕನ್ನಡ ತೀರ್ಪುಗಳು - ಇವು ಇವರು ಇತರರೊಡನೆ ಸಂಪಾದಿಸಿರುವ ಕೃತಿಗಳು. 1978ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ಮೂಲಕ ಗೌರವ ಪ್ರಶಸ್ತಿಗಳನ್ನು ಸಲ್ಲಿಸಿ ಗೌರವಿಸಿತು.
ರಾಜಪುರೋಹಿತರು ರಾಯಚೂರಿನಲ್ಲಿ 1986 ಏಪ್ರಿಲ್ 26ರಂದು ನಿಧನರಾದರು.
(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ